ಹಾಡೋ ಹಕ್ಕಿ ಹಾಡಿದೆ
ಅದಕೂ ನೆನಪು ಕಾಡಿದೆ
ನನ್ನ ನೆನಪ ಬಿಚ್ಚಿದೆ
ಹಲ್ಲು ತುಟಿಯ ಕಚ್ಚಿದೆ
ಹಾಡಿಗೇಕೆ ರಾಗಬೇಕು?
ಕಿವಿಗಳೆಲ್ಲ ಮುಚ್ಚಿದೆ
ಕುಣಿವ ಕಾಲ್ಗಳೆಲ್ಲ ದಣಿದು
ಮನಕೆ ನೋವ ಚುಚ್ಚಿವೆ
ಅವಳ ಮಾತು ಮುತ್ತೆ ಎಂದು
ಎಲ್ಲರೊಡನೆ ಹಾಡಿದೆ
ನಾನೂ ಗೆಜ್ಜೆ ಕಟ್ಟಿಕೊಂಡು
ನೃತ್ಯವನ್ನೆ ಮಾಡಿದೆ
ಕಾಲು ಸವೆದು ಗೆಜ್ಜೆ ಮುರಿದು
ಮೂಲೆಯಲ್ಲಿ ಬಿದ್ದಿದೆ
ಅವಳ ಮಾತು ಅವಳ ಸನ್ನೆ
ಬೇರೆ ಕಡೆಗೆ ಒಲಿದಿದೆ
ರುತುಗಳುರುಳಿ ಚೈತ್ರ ಬರಲು
ಮತ್ತೆ ಗಾನ ಮೊಳಗದೆ?
ನನ್ನ ಎದೆಯ ಮಿಡಿತ ಅರಿತು
ನಾಟ್ಯ ನವಿಲು ಬಾರದೆ
ನಾನು ಇನ್ನು ಹಾಡು ಹಾಡೇ
ಅವಳು ಅದಕೆ ಕುಣಿವಳೆ?
ಹೆಜ್ಜೆ ಗೆಜ್ಜೆ ಎಲ್ಲ ಸೇರಿ
ಬದುಕು ನನಗೆ ಕೊಡುವಳೆ?
Tuesday, March 18, 2008
Subscribe to:
Post Comments (Atom)
No comments:
Post a Comment