Thursday, December 31, 2009

myPOD:"ಹೊಸವರುಷ ತರಲಿ ಹರುಷ!"

ನನ್ನ ಹವ್ಯಾಸ ಹುಟ್ಟಿ ಬೆಳೆದ ಆ ದಿನಗಳ ಚಿತ್ರಗಳು! ಬರೋಬ್ಬರಿ 4 ವರುಷಗಳ ಹಿಂದಿನ ಈ ಚಿತ್ರಗಳ ಪುಟಗಳನ್ನು ತಿರುಚಿದಾಗ ಎನೋ ಖುಶಿ!

ದಿನವುರುಳಿ ಯುಗವಾಗಿ
ಯುಗವೊಂದು ಕ್ಷಣವಾಗಿ
ಕ್ಷಣ-ಕ್ಷಣವು ನೆನಪಾಗಿ
ಅಳಿಯದೆ ಉಳಿದರೆ, ಅದೇ ಬದುಕಿ(ನ/ದ) ಸಾರ್ಥಕತೆ!

ಹೊಸವರುಷ ನಿಮಗೆಲ್ಲ ತರಲಿ ಹರುಷ ಅಂದು ಹಾರೈಸುವ,

ಇಂತೀ ನಿಮ್ಮ ಪ್ರೀತಿಯ,
ಸ್ವರಚಿತ!


Tuesday, December 29, 2009

ಸಿ. ಅಶ್ವಥ್ ಇನ್ನಿಲ್ಲ:-(

ಸ್ವಂತಿಕೆಯ ಗಾಯಕ, 'ಕನ್ನಡವೇ ಸತ್ಯ'ವೆಂದ ಮಹಾನ್ ಚೇತನ, ಹಲವಾರು ಕವಿಗಳ ಪದಗಳಿಗೆ ಜೀವತುಂಬಿದ ಸಿ. ಅಶ್ವಥ್ ಇನ್ನಿಲ್ಲ.

ಗಿಳಿ(ಆತ್ಮ)ಯು ಪಂಜರ(ದೇಹ)ದೊಳಿಲ್ಲ,
ಎಲ್ಲಾ ಮಾಯ, ಇಲ್ಲಿ ನಾವೂ ಮಾಯ!
ಕೋಡಗನ ಕೋಳಿ ನುಂಗಿತ್ತಾ
ಮೈಸೂರು ಮಲ್ಲಿಗೆ, ಶ್ರಾವಣ ಹೀಗೆ ಸಾವಿರಾರು ಹಾಡನ್ನ ನಮಗಿತ್ತು ಮಾಯವಾಗಿದ್ದಾರೆ. ಕಾಣದ ದಾರಿ ತುಳಿದು ಇಹಲೋಕ ತ್ಯಜಿಸಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೋರೋಣ. ಮಾಯ ಎಂದ ತಕ್ಷಣ ಯಾವುದೋ ಗೀತೆಯ ಮೂಲಕ ಜೀವಂತವಾಗುತ್ತಾರೆ. ಅವರು ಚಿರಾಯು, ಇನ್ನಿಲ್ಲವಾದರೂ ಬದುಕುತ್ತಾರೆ. ಅವರ ಬದುಕಿನ ಕೆಲ ವರುಷ ನಾನೂ ಜೊತೆಯಲ್ಲಿ ಇದ್ದದ್ದಕ್ಕೆ ಧನ್ಯೋಸ್ಮಿ!

Wednesday, December 16, 2009

myKavana:"ಉಡುಪಿಯಲ್ಲಿ..."

ಎಂದಾದರೊಂದು ದಿನ ನಾನು ಉಡುಪಿಗೆ ಹೊಗಿ
ರಥಬೀದಿಯನು ಅಲೆದು ನೋಡಬೇಕು
ಅಲ್ಲೆ ಎಲ್ಲಾದರು ರಸ್ತೆಪಕ್ಕದಿ ನಿಂತು ಚುರುಮುರಿಯ
ರುಚಿಯನ್ನು ಸವಿಯಬೇಕು

ಚುರುಮುರಿಯ ತಿನ್ನುತ್ತ ಬೀದಿ ಬೀದಿಯನಲೆದು
ಕೈಕಾಲುಗಳು ತುಂಬಾ ಸುಸ್ತಾಗಬೇಕು
ಅಲ್ಲಿರುವ ಎಳೆ ತಾಳೆ ಬೊಂಡ ಕೆತ್ತುತ್ತಲೇ
ಅದರ ಸವಿ ನಾಲಗೆಗೆ ತಿಳಿಯಬೇಕು.

ಒಮ್ಮೆ ಎಂದಾದರು ಬೆಂಗ್ರೆ ಪರಿಸರದಲ್ಲಿ
ಸಂಜೆಯಲಿ ನಾವೆಲ್ಲ ತಿರುಗಬೇಕು.
ನದಿ ಸೇರಿ ಸಾಗರವ ಸೃಷ್ಟಿಸಿಹ ಸ್ವರ್ಗದಲಿ
ತಂಪಾದ ಗಾಳಿ ಸದಾ ಸುಳಿಯಬೇಕು

ಮುಂದೆ ಎಂದಾದರು ಮಲ್ಲಿಗೆಯ ತೋಟದಲಿ
ಅರಳುವಾ ಪರಿಯನ್ನು ನೋಡಬೇಕು
ಕಂಪನ್ನು ಸವಿಯುತ್ತಾ ಮೂರು ಮೊಳ ಮಲ್ಲಿಗೆಯ
ನಲ್ಲೆ ಜಡೆ ತುಂಬಾ ಮುಡಿಸಬೇಕು

ಹೀಗೆ ಎಂದಾದರು ಮಲ್ಪೆ ಕಡಲಿನ ದಡದಿ
ನಾವೆಲ್ಲ ಒಂದು ದಿನ ಕೂಡಬೇಕು,
ಅಲ್ಲಿ ಮರಳಿನ ಮೇಲೆ ಕುಳಿತಿರಲು ತಂಪಾಗಿ
ಸೂರ್ಯದೇವರ ಅಸ್ತ ಕಾಣಬೇಕು