Friday, January 16, 2015
Grey Wagtail
ಬೆಳಗ್ಗೆ ಎದ್ದು ಪ್ರತಿದಿನ ಮೊದಲು ನಾಲ್ಕು ತೆಂಗಿನಮರ ನೋಡಿದರೆ ಆ ದಿನ ಶುಭಕರವಾಗಿರುತ್ತದೆ ಎಂಬುದು ಹಿರಿಯರ ನುಡಿ. ಆದಕ್ಕೋಸ್ಕರವೇ ಏನೋ, ಮನೆಸುತ್ತ ಸ್ವಲ್ಪ ಜಾಗವಿದ್ದರೂ ಮಲೆನಾಡಲ್ಲಿ ತೆಂಗಿನಗಿಡಗಳು ಗರಿಗೆದರಿ ನಿಂತಿರುತ್ತವೆ. ಪಟ್ಟಣದ ನೆಲಬಿಟ್ಟು ನಿಂತ ಮನೆಗಳಿಗೆ ಇದು ಅಪಾರ್ಥವೆನಿಸಿದರೂ, ಹಳ್ಳಿಗರಿಗಂತೂ ಇದು ಬಹುಬೇಗ ಮನದಟ್ಟಾದೀತು. ಮೊದಮೊದಲು ನನಗೂ ತೆಂಗಿನಮರದಲ್ಲಿ ಬರಿಯ ಮಡಲು, ಒಣಗಿದ ತೆಂಗಿನಕಾಯಿ, ಬೊಂಡಗಳಷ್ಟೇ ಕಾಣುತ್ತಿದ್ದವು, ಇತ್ತೀಚೆಗೆ ಮರವ ತುಸು ದಿಟ್ಟಿಸಿ ಸೂಕ್ಷ್ಮವಾಗಿ ನೋಡುವ ಕಾರಣದಿಂದಲೋ ಎನೋ ಒಮ್ಮೊಮ್ಮೆ ಮರಕುಟಿಗ, ಪಿಂಗಾರದ ಮಧುವನ್ನೂ ಬಿಡದೆ ಹೀರುವ ಸೂರಕ್ಕಿಗಳು, ಮಡಲೊಡಲ ಭಕ್ಷಿಸುವ ಕೀಟಗಳನ್ನು ಹಿಡಿದು ತಿನ್ನುವ ಚಿತ್ರಪಕ್ಷಿಗಳು, ನೊಣಹಿಡುಕಗಳು- ಏನು ಒಂದೇ ಎರಡೇ! ಅಳಿಲಂತೂ ಮರದಿಂದ ಮರಕ್ಕೆ ಜಿಗಿಯುತ್ತಾ, ಕೆಳಗೆ ಬೆಕ್ಕು ಕಂಡರೆ ಚುಕ್-ಚುಕ್ ಅಂತ ಅರಚುವುದು, ಇವೆಲ್ಲಾ ಈಗ ದೈನಂದಿನ ಚಟುವಟಿಕೆಯಾಗಿ ಹೋಗಿದೆ. ಮಲೆನಾಡ ಚಳಿಯಲ್ಲಿ ಒಂದು ಮುಂಜಾನೆ ಹೀಗೆ ಮರವ ದಿಟ್ಟಿಸಿ ನೋಡುತ್ತಾ ಚಾ ಹೀರುತ್ತಿರುವಾಗ, ಒಣಗಿಸಲು ಅಂಗಳದಲ್ಲಿ ಹಾಕಿದ ಅಡಿಕೆಗಳ ಮಧ್ಯೆ ಎನೋ ಬಾಲವನ್ನು ಅಲ್ಲಾಡಿಸುತ್ತಾ ಕುಪ್ಪಳಿಸುತ್ತಾ ಅಡಿಕೆಗಳ ಸೆರೆಯಲ್ಲಿರುವ ಜೇಡದಂತಹ ಕೀಟಗಳನ್ನು ಹಿಡಿದು ತಿನ್ನುವ ಈ ಬೂದು ಸಿಪಿಲೆ ಕಾಣಸಿಕ್ಕಿತು. ಮಲೆನಾಡಿಗೆ ಚಳಿಗಾಲದಲ್ಲಿ ಬರುವ ವಲಸೆ ಹಕ್ಕಿಗಳಲ್ಲಿ ಇವೂ ಒಂದು.
Grey Wagtail | Sullia | 30Dec14
Plum-headed Parakeet
ಆಕಾಶದೆತ್ತರದಲ್ಲೇ ಕಿರಿಚುತ್ತಾ ವೇಗವಾಗಿ ಓಡಾಡುವ ಈ ಕೆಂದೆಲೆ ಗಿಳಿಗಳನ್ನ ಚಿತ್ರಿಸುವುದು ನನ್ನಿಂದ ಬಹಳ ಕಷ್ಟ ಎಂದು ಕೈಕಟ್ಟಿ ಕುಳಿತುಕೊಳ್ಳುತ್ತಿದ್ದೆ. ಬಹಳಷ್ಟು ಸಲ ಅವುಗಳ ಕೂಗು ಕೇಳಿಸಿದರೂ ಕ್ಯಾಮರ ಹೊರತೆಗೆಯುತ್ತಿರಲಿಲ್ಲ. ಈ ಸಲ ಮಳೆಗೆ ಮುರಿದು ಬಿದ್ದ ಕೆಲವು ಅಡಿಕೆಮರಗಳನ್ನು ಹಾಗೇ ಕಡಿಯದೆ ಬಿಟ್ಟಕಾರಣ ಇವನ್ನೆಲ್ಲ ಹತ್ತಿರದಿಂದ ನೋಡಿ ಚಿತ್ರೀಕರಿಸುವ ಕನಸು ನನಸಾಯಿತು. ಮಕ್ಮಲ್ ನೆತ್ತಿಯ ಮರಗುಬ್ಬಿಗಳು, ಚಿಟ್ಟುಗಿಳಿಗಳು, ಕೆಂದೆಲೆ ಗಿಳಿಗಳು, ಮರಕುಟಿಗಗಳು ಹೀಗೆ ಬಹಳಷ್ಟು ಹಕ್ಕಿಗಳು ಒಣ ಅಡಿಕೆಮರವನ್ನು ಪರೀಕ್ಷಿಸದೆ ಬಿಡವು. ಗೂಡುಕಟ್ಟಲೂ ಇದು ಪ್ರಶಸ್ತ ಕಾಲ ಮತ್ತು ತಾಣವಾದುದರಿಂದ ಇವುಗಳ ಮದ್ಯೆ ತಂಟೆ, ಜಗಳ ಎಲ್ಲ ನೋಡಲು ಸಾಧ್ಯವಾಯಿತು.
Plum-headed Parakeet | Sullia | 21Dec14
Subscribe to:
Posts (Atom)