ಬೆಳಗ್ಗೆ ಎದ್ದು ಪ್ರತಿದಿನ ಮೊದಲು ನಾಲ್ಕು ತೆಂಗಿನಮರ ನೋಡಿದರೆ ಆ ದಿನ ಶುಭಕರವಾಗಿರುತ್ತದೆ ಎಂಬುದು ಹಿರಿಯರ ನುಡಿ. ಆದಕ್ಕೋಸ್ಕರವೇ ಏನೋ, ಮನೆಸುತ್ತ ಸ್ವಲ್ಪ ಜಾಗವಿದ್ದರೂ ಮಲೆನಾಡಲ್ಲಿ ತೆಂಗಿನಗಿಡಗಳು ಗರಿಗೆದರಿ ನಿಂತಿರುತ್ತವೆ. ಪಟ್ಟಣದ ನೆಲಬಿಟ್ಟು ನಿಂತ ಮನೆಗಳಿಗೆ ಇದು ಅಪಾರ್ಥವೆನಿಸಿದರೂ, ಹಳ್ಳಿಗರಿಗಂತೂ ಇದು ಬಹುಬೇಗ ಮನದಟ್ಟಾದೀತು. ಮೊದಮೊದಲು ನನಗೂ ತೆಂಗಿನಮರದಲ್ಲಿ ಬರಿಯ ಮಡಲು, ಒಣಗಿದ ತೆಂಗಿನಕಾಯಿ, ಬೊಂಡಗಳಷ್ಟೇ ಕಾಣುತ್ತಿದ್ದವು, ಇತ್ತೀಚೆಗೆ ಮರವ ತುಸು ದಿಟ್ಟಿಸಿ ಸೂಕ್ಷ್ಮವಾಗಿ ನೋಡುವ ಕಾರಣದಿಂದಲೋ ಎನೋ ಒಮ್ಮೊಮ್ಮೆ ಮರಕುಟಿಗ, ಪಿಂಗಾರದ ಮಧುವನ್ನೂ ಬಿಡದೆ ಹೀರುವ ಸೂರಕ್ಕಿಗಳು, ಮಡಲೊಡಲ ಭಕ್ಷಿಸುವ ಕೀಟಗಳನ್ನು ಹಿಡಿದು ತಿನ್ನುವ ಚಿತ್ರಪಕ್ಷಿಗಳು, ನೊಣಹಿಡುಕಗಳು- ಏನು ಒಂದೇ ಎರಡೇ! ಅಳಿಲಂತೂ ಮರದಿಂದ ಮರಕ್ಕೆ ಜಿಗಿಯುತ್ತಾ, ಕೆಳಗೆ ಬೆಕ್ಕು ಕಂಡರೆ ಚುಕ್-ಚುಕ್ ಅಂತ ಅರಚುವುದು, ಇವೆಲ್ಲಾ ಈಗ ದೈನಂದಿನ ಚಟುವಟಿಕೆಯಾಗಿ ಹೋಗಿದೆ. ಮಲೆನಾಡ ಚಳಿಯಲ್ಲಿ ಒಂದು ಮುಂಜಾನೆ ಹೀಗೆ ಮರವ ದಿಟ್ಟಿಸಿ ನೋಡುತ್ತಾ ಚಾ ಹೀರುತ್ತಿರುವಾಗ, ಒಣಗಿಸಲು ಅಂಗಳದಲ್ಲಿ ಹಾಕಿದ ಅಡಿಕೆಗಳ ಮಧ್ಯೆ ಎನೋ ಬಾಲವನ್ನು ಅಲ್ಲಾಡಿಸುತ್ತಾ ಕುಪ್ಪಳಿಸುತ್ತಾ ಅಡಿಕೆಗಳ ಸೆರೆಯಲ್ಲಿರುವ ಜೇಡದಂತಹ ಕೀಟಗಳನ್ನು ಹಿಡಿದು ತಿನ್ನುವ ಈ ಬೂದು ಸಿಪಿಲೆ ಕಾಣಸಿಕ್ಕಿತು. ಮಲೆನಾಡಿಗೆ ಚಳಿಗಾಲದಲ್ಲಿ ಬರುವ ವಲಸೆ ಹಕ್ಕಿಗಳಲ್ಲಿ ಇವೂ ಒಂದು.
Grey Wagtail | Sullia | 30Dec14
1 comment:
yellow wagtail dear
Post a Comment