ಪಟ್ಟಣದ ಮಧ್ಯದಲಿ
ಹೇಗೋ ಉಳಿದಿತ್ತು.
ಒಂಟಿಯಾಗಿತ್ತು.
ನಗುವುದನೇ ಮರೆತಿತ್ತು.
ಯಾರಿಂದು ನಗಿಸಿದರು?
ಇಲ್ಲಿ ಗಾಳಿ ಬೀಸಲಿಲ್ಲ,
ಮೋಡ ಮುಸುಕಿದೆ.
ರವಿಯೂ ಕಾಣುವುದಿಲ್ಲ.
ಬಹಳ ಸೆಖೆ-ನಗಿಸಲು
ಇಲ್ಲಿಗೆ ಮಳೆಯೂ ಬರವುದಿಲ್ಲ.
ಯಾಕೆ ನಕ್ಕಿತು ಮರವು?
ತನಗಿಂತ ಎತ್ತರದಿ
ಗಗನಚುಂಬಿಸಲು
ಹೊರಟ ಕಟ್ಟಡಗಳೇ
ನೀವು ನಗಿಸಿದಿರಾ?
ಸುತ್ತ ಕಸರಾಶಿ,
ಇದು ಹಿಂದಿನ ಸಸ್ಯಕಾಶಿ
ಬೇರ ಸೋಕುತಿದೆ ದುರ್ನಾತ ನೀರು
ಸುತ್ತ ತುಂಬಾ ಹೊಗೆ-ದೂಳು,
ಒಡಲೊಳು ಬ್ಯಾನರಿನ ಮೊಳೆ ಚೂರು!
ಯಾರು ನಗಿಸಿದರಿಲ್ಲಿ ಮರಳಿ ಮರವ?
ಮತ್ತೆ ಯೋಚಿಸಿದೆ,
ನಗಲು ಕಾರಣವೇಕೆ?
ಹೀಗೊಮ್ಮೆ,ಹಾಗೊಮ್ಮೆ
ನಗಬಾರದೇ, ಪರರ ನಗಿಸಲು?
ನಗಲಿ ಮರ ನಗಿಸಲು,
ನಾಳೆ ಮರ ಅಳಿದ ಮೇಲೆ
ನಗಿಸಲಾರಿರರು.
ಒಂಟಿಮರ ನಗುವ ಭರದಿ
ಹಾರುತಿವೆ ಕೆಲ ಹಣ್ಣೆಲೆಗಳು, ಇದು ಕುಹಕವಲ್ಲ!
ಕಾಣಿಸದೆ ನಿಮಗೆ? ನೋಡಿಬಿಡಿ ಇಂದೇ,
ನಾಳೆ ಮರವಿರದು ಇಲ್ಲಿ.
ಯಾಕೆ ನಕ್ಕಿತು ಮರವು?
ವರುಷ ಕಳೆದ ಮೇಲೆ, ಮರಳಿದೆ
ಹಕ್ಕಿಗಳ ಹಿಂಡು, ಮರದ ಹಣ್ಣಿಗೆಂದು.
ಮಾತಾಡಲಿದೆ ಅವಕೆ ತುಂಬ ವಿಷಯ.
ಮರೆತ ನಗುವ ಮತ್ತೆ ಇವು ಮೂಡಿಸಿತೇ?
ಕೊನೆಗೆ,
ಮರಬೇಡಿದೆ- ಹಕ್ಕಿಗೆ, ಹಣ್ಣತಿನ್ನಿರಿ ನೀವು,
ಮತ್ತೆ ದೂರದೂರಿಗೆ ಹೋಗಿ ಬೀಜ ಬಿತ್ತಲು!